ಸೋಮೇಶ್ವರ (ಕಳಚುರಿ) - 
	ಕಲ್ಯಾಣದ ಕಳಚುರಿ ವಂಶದ ರಾಜ (1167-76). ರಾಯಮುರಾರಿ ಸೋವಿದೇವ ಎಂದೂ ಪ್ರಸಿದ್ಧನಾಗಿರುವ ಈತ ಇಮ್ಮಡಿ ಬಿಜ್ಜಳನ ಮಗ ಮತ್ತು ಉತ್ತರಾಧಿಕಾರಿ. ಬಿಜ್ಜಳನ ಕಾಲದಲ್ಲಿ ಈತ ಮಂಗಳವೇಡೆಯಲ್ಲಿ ತರ್ದವಾಡಿ 1000ವನ್ನು (ಈಗಿನ ಬಿಜಾಪುರ ಜಿಲ್ಲೆಯ ಪ್ರದೇಶ) ಆಳುತ್ತಿದ್ದ. 1167ರ ಹೊತ್ತಿಗೆ ಬಿಜ್ಜಳ ರಾಜ್ಯವನ್ನು ಸೋವಿದೇವನಿಗೆ ವಹಿಸಿದ. ಆದರೆ ಸಿಂಹಾಸನಕ್ಕಾಗಿ ಇತರ ಪ್ರತಿಸ್ಪರ್ಧಿಗಳೂ ಇದ್ದರು. ಅವರಲ್ಲಿ ಬಿಜ್ಜಳನ ತಮ್ಮ ಮೈಳುಗಿ ಮತ್ತು ಬಿಜ್ಜಳನ ಹಿರಿಯ ಮಗ ವಜ್ರದೇವನ ಪುತ್ರ ಕರ್ಣ ಮುಖ್ಯರು. ಇವರು ರಾಜ್ಯದ ಕೆಲವು ಭಾಗಗಳಲ್ಲಿ ಸ್ವಲ್ಪ ಕಾಲ ಸ್ವತಂತ್ರರಾಗಿ ಆಳಿದರೂ ಸೋವಿದೇವ ಶೀಘ್ರದಲ್ಲಿ ಇವರೆಲ್ಲರನ್ನೂ ಹತ್ತಿಕ್ಕಿದ. ಈ ಕಾರ್ಯದಲ್ಲಿ ದಂಡನಾಯಕ ಮಾಧವ ಇವನಿಗೆ ಸಹಾಯಕನಾಗಿದ್ದ.

	ಸೋವಿದೇವನ ಶಾಸನಗಳು ಕಲ್ಯಾಣದಿಂದ ಬಳ್ಳಿಗಾವೆವರೆಗಿನ ವಿಶಾಲ ಪ್ರದೇಶದಲ್ಲಿ ಸಿಕ್ಕಿವೆ. ಪಿತ್ರಾರ್ಜಿತವಾಗಿ ಬಂದ ರಾಜ್ಯವಲ್ಲದೆ, ಬೆಳಗಾಂವಿ, ಬಲ್ಲಕುಂದೆ ಮತ್ತು ಮಡಗಿಹಾಳ ಪ್ರಾಂತಗಳನ್ನು ಈತ ಆಕ್ರಮಿಸಿದಂತೆ ತೋರುತ್ತದೆ. ಆದರೆ ಇವನ ಆಳಿಕೆಯ ಕೊನೆಯ ವರ್ಷಗಳಲ್ಲಿ, ಅಂದರೆ 1175-76ರ ಸುಮಾರಿನಲ್ಲಿ ಇವನ ತಮ್ಮಂದಿರಾದ ಮೈಳುಗಿ ಮತ್ತು ಸಂಕಮರು ಸೊಲ್ಲಾಪುರ ಮತ್ತು ಬಿಜಾಪುರ ಜಿಲ್ಲೆಯ ಭಾಗಗಳಲ್ಲಿ ಸ್ವತಂತ್ರವಾಗಿ ಆಳಲಾರಂಭಿಸಿದರು.

	ಸೋವಿದೇವ ತನ್ನನ್ನು ಕುಂತಳದೇಶ ಚಕ್ರವರ್ತಿ ಎಂದು ಕರೆದು ಕೊಂಡಿದ್ದಾನೆ. ಈತನ ರಾಣಿ ಸಾವಲದೇವಿ ಸಂಗೀತ ಮತ್ತು ನೃತ್ಯದಲ್ಲಿ ನಿಪುಣೆಯಾಗಿದ್ದಳೆಂದು ಶಾಸನಗಳು ತಿಳಿಸುತ್ತವೆ.					
		 (ಎ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ